- ಸಿಡ್ನಿಯಲ್ಲಿ ಜೋಕುಮಾರಸ್ವಾಮಿ ನಾಟಕ ಮಾಡಿದ ಬಗ್ಗೆ ಇಲ್ಲಿ ಸುದರ್ಶನ್ ವಿವರಿಸಿದ್ದಾರೆ.
ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ ಪ್ರದರ್ಶನವದು. ನಂತರ ಎಂಬತ್ತರ ದಶಕದಲ್ಲೂ ಬೆಂಗಳೂರಿನ “ಬೆನಕ” ತಂಡದವರು ಅದನ್ನು ನೂರಾರು ಬಾರಿ ಆಡಿದರು, ಈಗಲೂ ಆಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಜೋಕುಮಾರಸ್ವಾಮಿಯ ಹೆಚ್ಚು ಕಡಿಮೆ ೫೦-೬೦ ಪ್ರದರ್ಶನಗಳಲ್ಲಿ ನಾನು ತೊಡಗಿಕೊಂಡಿದ್ದೆ. ಮೇಳದಲ್ಲಿ ಹಾಡುಗಾರನಾಗಿ, ಗೌಡನ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಹೀಗೆ ನಾನಾ ರೀತಿಯಲ್ಲಿ. ಆಗ ಅದು ನನಗೆ ತುಂಬಾ ಖುಷಿಕೊಟ್ಟ ಅನುಭವ. ಒಂದು ನಾಟಕವನ್ನು ಮತ್ತೆ ಮತ್ತೆ ಮಾಡುವಾಗ ಬರುವ ಅನುಭವ ಬೇರೆಯೇ ರೀತಿಯದು. ನಾಟಕದ ಕ್ರಿಯೆಗಿಂತ ಅದರ ವಿನ್ಯಾಸದತ್ತ ನಮ್ಮ ಗಮನ ಹರಿಯಲು ಮರು ಪ್ರದರ್ಶನಗಳು ತುಂಬಾ ಸಹಾಯ ಮಾಡುತ್ತವೆ.
ಈಗ ೨೦೦೭ರಲ್ಲಿ ಸಿಡ್ನಿ ಕನ್ನಡ ಸಂಘ ಅದೇ ನಾಟಕವನ್ನು ಸಿಡ್ನಿಯಲ್ಲಿ ಮಾಡಲಾಗುತ್ತದೆಯೇ ಎಂದು ನನ್ನನ್ನು ಕೇಳಿದಾಗ ಬಹಳ ಖುಷಿಯಿಂದ ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ. ಸವಾಲೇಕೆಂದರೆ, ನಾಟಕಕ್ಕೆ ಬೇಕಾದ ಹಾಡುಗಾರರು ಮತ್ತು ನಟರ ಪೂರ್ವತಯಾರಿಯ ಬಗ್ಗೆ ನನಗೆ ಸ್ಪಷ್ಟ ಅರಿವು ಇದ್ದಿತ್ತು. ಬೆಂಗಳೂರಿನ ಪ್ರದರ್ಶನಗಳಲ್ಲಿ ಯಾವುದು ದತ್ತವಾಗಿತ್ತೋ ಅದನ್ನು ಇಲ್ಲಿ ಮೊದಲ ಬಾರಿಗೆ ಎಂಬಂತೆ ರೂಪಿಸುವ ಅವಶ್ಯಕತೆ ಇತ್ತು.
-೨-
ಮೊತ್ತ ಮೊದಲು ನಾನು ಮಾಡಿದ ನಿರ್ಧಾರವೆಂದರೆ, ಈ ನಾಟಕವನ್ನು ಬಿ.ವಿ.ಕಾರಂತರ ವಿನ್ಯಾಸದಲ್ಲೇ ಮಾಡುವುದು ಮತ್ತು ಅದಕ್ಕೆ ಚಂದ್ರಶೇಖರ ಕಂಬಾರರ ಸಂಗೀತ ಶೈಲಿಯನ್ನೇ ಬಳಸುವುದು ಎಂದು. ಈ ನಿರ್ಧಾರವನ್ನು ನಾಟಕ ಮಾಡಲು ಸುಲಭವಾಗುತ್ತದೆ ಎಂದು ಮಾಡಿಕೊಂಡ ನಿರ್ಧಾರವಲ್ಲ. ಏಕೆಂದರೆ ಆ ವಿನ್ಯಾಸದ ಸವಾಲುಗಳು ನನಗೆ ಚೆನ್ನಾಗಿ ಗೊತ್ತಿದ್ದವು. ಬಹುಶಃ ಬೇರೆಯೇ ವಿನ್ಯಾಸವಾಗಿದ್ದರೆ ಸುಲಭವಾಗಬಹುದಿತ್ತೇನೋ, ಆದರೆ ಮೂಲಕ್ಕೆ ಹೇಳಿ ಮಾಡಿಸಿದಂತಿದ್ದ ಆ ವಿನ್ಯಾಸ ಬಿಟ್ಟು ಬೇರೆ ಬಗೆಯಾಗಿ ಯೋಚಿಸುವುದು ಅನಗತ್ಯ ಅನಿಸಿತ್ತು. ಒಂದು ರೀತಿಯಲ್ಲಿ, ಚಂದ್ರಶೇಖರ ಕಂಬಾರರು ಆ ನಾಟಕವನ್ನು ಬರೆದು, ಆಡಿ, ತಿದ್ದಿ, ಆಡಿ, ತಿದ್ದಿರಬೇಕೆಂದು ನನ್ನ ಗುಮಾನಿ. ಯಾಕೆಂದರೆ, ನಾಟಕ ಮತ್ತು ಅದರ ವಿನ್ಯಾಸ ಅಷ್ಟು ಸೊಗಸಾಗಿ ಒಂದಕ್ಕೊಂದು ಮೇಳೈಸಿಕೊಂಡಿದೆ.
ಸುಮರು ಎರಡು ಗಂಟೆಗೂ ಮೀರಿ ಇರುವ ನಾಟಕವನ್ನು ನಮಗೆ ಒಂದೂವರೆ ಗಂಟೆಯಲ್ಲಿ (ಮುಂದೆ ಅದು ಹಿಗ್ಗಿದರೂ ಕೂಡ) ಮಾಡಬೇಕಾದ ಅನಿವಾರ್ಯವಿತ್ತು. ಅದಕ್ಕೆ ಯಾವ ಭಾಗಗಳನ್ನು ಕೈಬಿಡುವುದೆಂದು ನಿರ್ಧರಿಸುವುದು ಕಷ್ಟವಾಯಿತು. ನಾಟಕ ತುಂಬಾ ಬಿಗಿಯಾಗಿರುವುದೇ ಆ ಕಷ್ಟಕ್ಕೆ ಕಾರಣ. ಒಂದು ದೊಡ್ಡ ಭಾಗವನ್ನು ಬಿಡಬೇಕಾದ ಅನಿವಾರ್ಯವಿತ್ತು. ನಾಟಕದಲ್ಲಿ ಬರುವ ಹೊಲೇರ ಸೂಳಿ ಶಾರಿ, ಗೌಡನ ಡೌಲಿನ ಹುಸಿತನವನ್ನು, ನಪುಂಸಕತೆಯನ್ನು ತೆರೆದಿಡುವ ಒಂದು ವಿಶಿಷ್ಟ ಪಾತ್ರ. ಗೌಡತಿಯ ಮಗುವಿನ ಹಂಬಲವನ್ನು ತೀಕ್ಷ್ಣ ಪರೀಕ್ಷೆಗೆ ಒಡ್ಡುವ ದೃಶ್ಯವಿದೆ. ಏನು ಬೇಕಾದರೂ ತನ್ನ ಮನೆಗೇ ಬಂದು ಬೀಳಿಸಿಕೊಳ್ಳಲು ಸಾಧ್ಯವಿರುವ ಗೌಡತಿ ಜೋಕುಮಾರನಿಗಾಗಿ, ಇನ್ನೊಬ್ಬಳ ಮನೆಗೆ ಬೇಡಿಕೊಂಡು ಹೋಗುತ್ತಾಳೆ. ಅದರಲ್ಲೂ ಆ ಇನ್ನೊಬ್ಬಳು ಸೂಳೆ. ಬೇರೆ ಹೆಂಗಸರು ತನ್ನ ಕಾಲಿಗೆ ಬೀಳುವುದೇ ಅಭ್ಯಾಸವಾಗಿರುವ ಗೌಡತಿ ಮತ್ತೊಬ್ಬಳ ಕಾಲಿಗೆ ಬಿದ್ದು ಬೇಡುತ್ತಾಳೆ. ಅದೂ ಕೂಡ ಒಬ್ಬ ಸೂಳೆಯ ಕಾಲಿಗೆ. ಆ ಎರಡು ಪಾತ್ರಗಳ ಮನೋವ್ಯಾಪಾರದ ದೂರವನ್ನು ಕಾರಂತರ ವಿನ್ಯಾಸದಲ್ಲಿ ಎಷ್ಟು ತೀವ್ರವಾಗಿ ರೂಪಿತವಾಗಿದೆಯೆಂದರೆ ಅದನ್ನು ನೋಡಿಯೇ ಅರಿಯಬೇಕು.
ಗೌಡತಿ ಬೇಡುತ್ತಾ ಹಾಡುವ ಹಾಡು ಎಷ್ಟು ಕರುಣಾಜನಕವಾಗಿದೆಯೋ, ಶಾರಿ ಅವಳಿಗೆ ಬಯ್ಯುವುದು, ಹೀಯಾಳಿಸುವುದು ಎಲ್ಲ ಇರುವ ಹಾಡನ್ನು ಮಾತಲ್ಲಿ ಗಡುಸಾಗಿ ಹೇಳಿಸಿ ಅಷ್ಟೇ ಕ್ರೂರವಾಗುವಂತೆ ಮಾಡಿದ್ದಾರೆ. ಗೌಡತಿ ಹಾಡುತ್ತಾ ಬೇಡುತ್ತಾಳೆ, ಶಾರಿ ಹಾಡನ್ನು ಗದ್ಯದಂತೆ ಹೇಳುತ್ತಾ ಹೋಗುತ್ತಾಳೆ. ಈ ದೃಶ್ಯವನ್ನು ಏಕೆ ಇಷ್ಟು ವಿವರಿಸಿದೆನೆಂದರೆ, ಆ ದೃಶ್ಯವನ್ನು ಕೈಬಿಡುವ ನಿರ್ಧಾರ ತೆಳುವಾಗಿ ತೆಗೆದುಕೊಂಡದ್ದಲ್ಲ ಎಂಬುದಕ್ಕಾಗಿ. ನಾಟಕದ ಉದ್ದದ ಕಾರಣವಲ್ಲದೆ ಮತ್ತೊಂದು ಕಾರಣ, ಶಾರಿಯಂಥ ಗಡಸು ಹೆಣ್ಣಿನ ಪಾತ್ರ ಮಾಡಲು ಸಿಡ್ನಿಯಲ್ಲಿ ಯಾರೂ ಸಿಕ್ಕದೇ ಇದುದು. ಸೂಳೆ ಪಾತ್ರದ ಬಗ್ಗೆ ಹಿಂಜರಿಕೆಯಿದ್ದರೂ ಕೂಡ ಒಂದಿಬ್ಬರು ತಾವು ಮಾಡುವುದಾಗಿ ಒಪ್ಪಿಕೊಂಡರು. ಆದರೆ, ಶಾರಿಯ ನಿಜ ಸ್ವರೂಪವನ್ನು ಅವರಿಂದ ಚಿತ್ರಿಸುವುದು ಸಾಧ್ಯವೇ ಎಂದು ತಲೆ ಕೆಡಸಿಕೊಂಡು, ಪ್ರದರ್ಶನಕ್ಕೆ ಅದೇ ದುರ್ಬಲ ದೃಶ್ಯವಾಗುವ ಬದಲು ಅದನ್ನು ಕೈಬಿಡುವುದೇ ಒಳ್ಳೆಯದೆಂದು ನಿರ್ಧರಿಸಿದೆವು.
ಇನ್ನು ಉಳಿದಂತೆ ಗೌಡತಿಗೆ ಜೋಕುಮಾರನ ಮಹಿಮೆಯನ್ನು ವಿವರಿಸುವ ಬಸ್ಸಿಯ ಮಾತುಕತೆಯನ್ನು ಮೊಟಕುಗೊಳಿಸಿದೆವು. ಬಸಣ್ಣ-ಗೌಡತಿ ಒಂದಾಗುವ ದೃಶ್ಯವನ್ನು ಚುರುಕುಗೊಳಿಸಿದೆವು. ಇದಲ್ಲದೆ, ಇಡೀ ನಾಟಕದಲ್ಲಿ ಬರುವ ಗಿಣಿಯ ಸೂಚನೆಗಳನ್ನು ಕೈಬಿಟ್ಟೆವು. ಗಿಣಿಗಾಗಿ ಹಂಬಲಿಸುವ ಗೌಡತಿಯ ಮಾತುಗಳು ಹಲವು ಸ್ತರಗಳಲ್ಲಿ ಕೆಲಸ ಮಾಡುತ್ತದೆ ಎಂದು ಗೊತ್ತಿದ್ದೂ ಅದನ್ನು ಕೈಬಿಡಲು ಕಾರಣ, ಆ ಗಿಣಿಯನ್ನು ಗೌಡತಿ ನುಂಗಿದಳು ಎಂಬ ಮಾತು ಗುರಿಯ ಹೇಳುತ್ತಾನೆ. ಅಲ್ಲಿವರೆಗೆ ಕಟ್ಟಿಕೊಂಡು ಬಂದ ಗಿಣಿಯ ಪ್ರತಿಮೆ ಅಲ್ಲಿ ಯಾಕೋ ಒಡೆದು ಅದು ಯಾವುದಕ್ಕೆ ಪ್ರತೀಕವಾಗುತ್ತದೆ ಎಂದು ಗೊಂದಲವಾಗುತ್ತದೆ. ಹಕ್ಕಿಯ ಪ್ರತೀಕಗಳನ್ನು ಉಳಿಸಿಕೊಂಡು ಗಿಣಿಯ ಮಾತುಗಳನ್ನು ಕೈ ಬಿಟ್ಟೆವು. ಆದಷ್ಟು ಮಟ್ಟಿಗೆ ಹಾಡುಗಳ ಎಲ್ಲ ಸೊಲ್ಲುಗಳನ್ನು ಉಳಿಸಿಕೊಂಡೆವು, ಒಂದೆರಡು ಕಡೆ ಹೊರತುಪಡಿಸಿ.
-೩-
ರಂಗವಿನ್ಯಾಸ, ನಟರು ಬರುವುದು-ಹೋಗುವುದು, ರಂಗದ ಮೇಲೆ ಅವರ ಓಡಾಟಗಳು, ಅವರ ಕ್ರಿಯೆ ಪ್ರತಿಕ್ರಿಯೆಗಳು ಎಲ್ಲವನ್ನೂ ನನಗೆ ನೆನಪಿದ್ದಷ್ಟು ಮಟ್ಟಿಗೆ ಕಾರಂತರ ವಿನ್ಯಾಸಕ್ಕೆ ಹತ್ತಿರವಿರುವಂತೆ ನೋಡಿಕೊಳ್ಳಲು ಪ್ರಯತ್ನಪಟ್ಟೆವು. ಅಷ್ಟೇ ಅಲ್ಲದೆ, ಉಡುಪು, ಉಡುಪಿನ ಬಣ್ಣ, ರಂಗ ಪರಿಕರ, ಬೆಳಕು ಎಲ್ಲವನ್ನೂ ಆಯ್ದ ವಿನ್ಯಾಸಕ್ಕೆ ಹತ್ತಿರವಿರುವಂತೆ ಪ್ರಯತ್ನಿಸಿದೆವು. ಸಿಡ್ನಿಯಲ್ಲಿ ಸಿಕ್ಕದ ಸೀರೆ, ಬಟ್ಟೆಗಳನ್ನು ಇಂಡಿಯಾದಿಂದ ತರಿಸಿಕೊಳ್ಳಬೇಕಾಯಿತು.
ಭಾವಗೀತೆ, ಚಿತ್ರಗೀತೆ ಮತ್ತು ಭಜನೆಗಳನ್ನು ಹಾಡಿ ಅಭ್ಯಾಸವಿರುವ ಗಾಯಕರಿಗೆ ಮೊದ ಮೊದಲು ಜಾನಪದ ಶೈಲಿಯ ಸೊಗಡು ಮತ್ತು ಕಂಬಾರರ ಧಾರವಾಡ ಕನ್ನಡದ ಶೈಲಿಯ ನುಡಿಗಳು ಬಾಯಿಗೆ ಹಾಕಿಕೊಳ್ಳುವುದು ಪ್ರಯಾಸದ ಕೆಲಸವೇ ಆಯಿತು. ಹಾಗಾಗಿಯೇ ಮೊದಲು ನಾಕು ವಾರ ಬರೇ ಹಾಡುಗಳನ್ನು ಕಲಿಯುವುದಕ್ಕೆ ಮೀಸಲಿಟ್ಟೆವು.
ಬೆಂಗಳೂರಿನಲ್ಲಿ ಪ್ರತಿ ಸಂಜೆ ನಾಟಕದ ತಾಲೀಮು ಆಗುವುದು ಸಹಜವಾದ ಬಗೆ. ಆದರೆ ಇಲ್ಲಿ ವಾರಾಂತ್ಯ ಮಾತ್ರ ನಮಗೆ ಸಿಕ್ಕುವುದು. ಸಿಕ್ಕುವ ಎರಡು ದಿನದ ಅವಕಾಶವನ್ನು ಆದಷ್ಟು ಚೆನ್ನಾಗಿ ಬಳಸುವ ಜವಾಬ್ದಾರಿ ಇತ್ತು. ಹಾಗಾಗಿ ಮೊದಲು ತಾಲೀಮನ್ನು ಎರಡು ಭಾಗವಾಗಿ ವಿಂಗಡಿಸಿಕೊಂಡು, ಮೊದಲ ಭಾಗ ಬರೇ ಹಾಡುಗಳು, ಎರಡನೇ ಭಾಗ ಬರೇ ನಟನೆಗೆ ಮೀಸಲಿಟ್ಟೆವು. ಮೂರು ವಾರಾಂತ್ಯಗಳು ಹೀಗೆ ಕಳೆದ ಮೇಲೆ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ಒಂದರಿಂದ ಸಂಜೆ ೬-೭ರವರೆಗೆ ಎಲ್ಲರೂ ಒಟ್ಟಿಗೆ ಸೇರಿದೆವು. ಮೇ ತಿಂಗಳ ಕಡೆಯ ವಾರದಿಂದ, ನಾಲ್ಕು ವಾರ ಅಂದರೆ ಎಂಟು ದಿನಗಳನ್ನು ಇಡೀ ನಾಟಕವನ್ನು run-through ಮಾಡಲು ಇಟ್ಟುಕೊಂಡೆವು. ಅಂದರೆ ಲೆಕ್ಕಾಚಾರದ ಪ್ರಕಾರ ಸುಮಾರು ೧೬ ಸಲ. ಆದರೆ, ನನಗೆ ನೆನಪಿದ್ದಂತೆ ಬರೇ ೧೦ ಸಲ ಮಾತ್ರ ಪೂರ್ತಿ ನಾಟಕವನ್ನು ನಮಗೆ ಮಾಡಲು ಸಾಧ್ಯವಾಯಿತು. ಉಳಿದಂತೆ ತಿದ್ದಿಕೊಳ್ಳುವುದಕ್ಕೇ ಹೊತ್ತು ಹಿಡಿಯಿತು. ನಮ್ಮ ನಟರಲ್ಲಿ ಮತ್ತು ಗಾಯಕರಲ್ಲಿ ಸುಪ್ತವಾಗಿದ್ದ ನಾಟಕ ಮಾಡುವ ಪ್ರೀತಿಗೆ ಅವರು ಕೊಟ್ಟ ಸಮಯ ಮತ್ತು ಶ್ರಮವೇ ಸಾಕ್ಷಿ.
-೪-
ಗೌಡನ ಪಾತ್ರ ಮಾಡಿದ ಶಾಂಸಿಂಗ್ ಮತ್ತು ಗೌಡತಿ ಪಾತ್ರ ಮಾಡಿದ ವೀಣಾರಿಗೆ ನಟನೆಯಲ್ಲಿ ತುಂಬಾ ಭಾವತೀವ್ರತೆಯನ್ನು ತರುವುದು ಬಲು ಇಷ್ಟ. ಆದರೆ ಇದು ಜಾನಪದ ಶೈಲಿಯ ನಾಟಕವಾದ್ದರಿಂದ ಭಾವಗಳು ಸೂಚ್ಯವಾಗುವಷ್ಟೇ ಬಂದು, ತೀವ್ರವಾದಾಗ ಹಾಡು, ಕುಣಿತಗಳಿಗೆ ಅದು ವರ್ಗವಾಗಬೇಕಾಗುತ್ತದೆ. ಮೂಲ ವಿನ್ಯಾಸದಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡೇ ನಟನೆಯ ಹದ್ದುಬಸ್ತು ಇದ್ದುದು ನಮ್ಮ ಅರಿವಿಗೆ ಬಂದಿತು. ಇನ್ನು ಗುರಿಯನ ಪಾತ್ರ ಮಾಡಿದ ಮಹೇಂದ್ರರವರು ಮಾತುಗಳು ಹೇಳುವಾಗ ಒಂದು ಬಗೆಯ ಏಕತಾನತೆಯನ್ನು ಹಿಡಿದುಬಿಟ್ಟಿದ್ದರು. ಅದನ್ನು ಬಿಡಿಸುವುದು ಮೊದಲ ಕೆಲಸವಾದರೆ, ಅವರು ಬಳಸುತ್ತಿದ್ದ ಫಾಲ್ಸ್ ವಾಯ್ಸ್‌ನ್ನು ಬಿಡಿಸಿ ತಮ್ಮ ಸ್ವಂತ ಧ್ವನಿಗೆ ಮರಳುವಂತೆ ಮಾಡುವುದು ಮುಖ್ಯವಾಯಿತು. ಏಕೆಂದರೆ, ಫಾಲ್ಸ್ ದನಿ ಬಳಸಿದಾಗ ಏರಿಳಿತಕ್ಕೆ, ಭಾವ ಸೂಚನೆಗೆ ತುಂಬಾ ತೊಂದರೆ ಇರುತ್ತದೆ. ದನಿ ಬದಲಿಸಿ, ಬದಲಾದ ದನಿಯನ್ನು ಬೇಕಾದ ಹಾಗೆ ಬಳಸುವುದಕ್ಕೆ ವಿಪರೀತ ಕಸುಬುದಾರಿಕೆ ಬೇಕಾಗುತ್ತದೆ. ಇನ್ನುಳಿದವರು ಹೇಳಿದ ನಟನೆಯ ಅಂಶವನ್ನು ಕೂಡಲೆ ಗ್ರಹಿಸಿ ಅದನ್ನು ಮಾಡುತ್ತಿದ್ದುದ್ದು ಒಂದು ಸಂತೋಷದ ವಿಷಯವೇ.
ಈ ನಾಟಕವನ್ನು ಮಾಡುತ್ತೇವೆ ಅಂದ ತಕ್ಷಣ ತೀವ್ರ ಉತ್ಸಾಹದ ಶಾಂಸಿಂಗ್, ಬಂದೂಕು, ಬಂದೂಕು ಸ್ಟಾಂಡ್, ಜೋಕುಮಾರ ಪಲ್ಲಕ್ಕಿ ಎಲ್ಲವನ್ನೂ ಮಾಡಲು ಶುರುಮಾಡಿಬಿಟ್ಟರು. ನಾಟಕದ ಮೇಳಕ್ಕಾಗಿ ನಮ್ಮ ಬಳಿಯಿದ್ದ ಮೂರು ಪ್ಲಾಟ್‌ಫಾರಂಗಳಲ್ಲದೆ ಇನ್ನೆರಡು ಪ್ಲಾಟ್‌ಫಾರಂಗಳನ್ನು ಮಾಡಿಕೊಂಡೆವು. ಉಳಿದಂತೆ ಉಡುಪು, ಸರ ಬಳೇ ಇತ್ಯಾದಿಯನ್ನು ಎಲ್ಲರೂ ಹೊಂದಿಸಿಕೊಂಡು ಇಲ್ಲದ್ದನ್ನು ಇಂಡಿಯಾದಿಂದ ತರಿಸಿದೆವು.
-೫-
ನಾಟಕದ ವಿನ್ಯಾಸದಲ್ಲಿ ನಾವು ಮಾಡಿಕೊಂಡ ಒಂದೆರಡು ವಿಸ್ತಾರಗಳನ್ನು ಇಲ್ಲಿ ಹೇಳಿಬಿಡುತ್ತೇನೆ. ಮೊದಲಿಗೆ, ಜನರು ಬರುವ ಮುಂಚೆಯೇ ಜೋಕುಮಾರಸ್ವಾಮಿ ದೇವರ ಪಲ್ಲಕ್ಕಿಯನ್ನು ಹೊರಗೆ ಇಟ್ಟುಬಿಟ್ಟೆವು. ಒಳಗೆ ಬಂದವರು ಯಾವುದೋ ಜಾತ್ರೆಗೆ ಬಂದಂತೆ ಅನಿಸಬೇಕೆಂಬ ಕಾರಣಕ್ಕೆ. ಆಗಾಗ ನಟರು ಅಲ್ಲಿ ಹೋಗಿ ಅದಕ್ಕೆ ನಮಸ್ಕಾರ ಮಾಡಿ ಬರುತ್ತಿದ್ದೆವು! ಎರಡನೆಯದಾಗಿ, ಪ್ರೇಕ್ಷಾಗೃಹದ ಹಿಂಭಾಗದಲ್ಲಿ ಜನರು ಒಳಗೆ ಬರುವ ಬಾಗಿಲ ಪಕ್ಕದಲ್ಲೇ, ಜನರು ಒಳಗೆ ಬರುತ್ತಿದ್ದಂತೆ ಅವರ ಎದುರೇ ನಾವು ಮೇಕಪ್ ಮಾಡಿಕೊಳ್ಳುತ್ತಿದ್ದೆವು. ಅರಿಯಾನಾ ಮ್ನೂಚ್ಕಿನ್ ಎಂಬ ಫ್ರೆಂಚ್ ನಾಟಕಗಾರ್ತಿಯ “ದ ಫ್ಲಡ್ ಡ್ರಮ್ಮರ್ಸ್” ಎಂಬ ನಾಟಕದಲ್ಲಿ ಹೀಗೆ ನಾವು ಮೇಕಪ್ ಮಾಡಿಕೊಳ್ಳುವ ನಟರ ನಡುವೆಯೇ ಪ್ರೇಕ್ಷಾಗೃಹದ ಒಳಗೆ ಹೋಗುವ ರೀತಿಯಿತ್ತು. ನಾನು ಚಿಕ್ಕವನಿದ್ದಾಗ ಯಕ್ಷಗಾನದ ಚೌಕಿಯಲ್ಲಿ ನಮ್ಮನಿಮ್ಮಂಥವರು ಪಾತ್ರಗಳಾಗುವುದನ್ನು ಕಣ್ಣಗಲಿಸಿ ನೋಡಿದವನು. ಇದೆಲ್ಲಾ ಈ ನಾಟಕದ ಆಟದಲ್ಲಿ ತರಬೇಕೆಂದು ಹಾಗೆ ಮಾಡಿದೆವು. ಇದರಿಂದಾಗಿ ನಾವು ಅಂದುಕೊಳ್ಳದ ಒಂದು ವಿಚಿತ್ರವಾದುದನ್ನು ಕೇಳಿ. ನಾವು ಹೀಗೆ ಮಾಡಿದ್ದು ನೋಡುಗರಿಗೆ ಒಂದು ಹೊಸ ಅನುಭವ ಕೊಡಬೇಕು ಅಂತ. ಆದರೆ ಇದರಿಂದ ಹೊಸ ಅನುಭವ ಆಗಿದ್ದು ನಟರಿಗೇ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಾಟಕ ಶುರು ಮಾಡುವ ಹೊತ್ತಿಗೆ ನಟರೆಲ್ಲರೂ ಬಂದ ಜನರನ್ನು ಭೇಟಿ ಮಾಡಿ, ಮಾತಾಡಿಸಿ, ಉಭಯಕುಶಲೋಪರಿಯಾಗಿದ್ದರಿಂದ ಹೊಸ ಉತ್ಸಾಹದಲ್ಲಿ, ಯಾವುದೇ ಟೆನ್ಷನ್ ಆಗಲಿ, ಆತಂಕವಾಗಲೀ ಆಗಲಿ ಇಲ್ಲದೆ ನಾಟಕ ಶುರು ಮಾಡುವ ಉತ್ಸಾಹದಲ್ಲಿ ಕುಣಿಯುತ್ತಿದ್ದರು!
ನಾಟಕದ ಕೊನೆಯಲ್ಲಿ ಕುಡುಗೋಲು, ದೊಂದಿಯ ದೃಶ್ಯವಿರುವುದು ನಿಮಗೆ ಗೊತ್ತಿರಬಹುದು. ಸಿಡ್ನಿಯಲ್ಲಿ ಯಾವುದೇ ರಂಗಮಂದಿರದಲ್ಲೂ ಬೆಂಕಿ ತರುವಂತಿಲ್ಲ! ತಂದರೆ ಅದರ fire-alarm ಹೊಡೆದುಕೊಂಡು ಬೆಂಕಿ ಆರಿಸುವವರು ಬಂದು ಬಿಡುವುದು ಖಾತ್ರಿ. ಅದಕ್ಕೆ ನಂತರ ನಮಗೆ ದಂಡ ಹಾಕುತ್ತಾರೆ. ದೊಂದಿ ತರದೇ ಇದ್ದರೆ ನಾಟಕದ ಕ್ಲೈಮಾಕ್ಸ್ ದುರ್ಬಲವಾಗುವ ತೊಂದರೆ ಇತ್ತು. ಲಾಟೀನು ತರಬಹುದೇ ಎಂಬ ಸೂಚನೆ ಬಂದಿತು ಆದರೆ ಆ ದೃಶ್ಯದ ಅಬ್ಬರಕ್ಕೆ ಅದು ತುಂಬಾ ದುರ್ಬಲ ಅನಿಸಿತು. ಬ್ಯಾಟರಿಯ ಕೆಂಪು ದೀಪಕ್ಕೆ ಬಟ್ಟೆ ಆಡುವಂತ ಒಂದು ದೊಂದಿಯನ್ನು ತರಬಹುದೇ ಎಂದು ಯೋಚಿಸಿದೆವು. ಇದು ನನಗೆ ಇಷ್ಟವೇ ಇರಲಿಲ್ಲ. ಜಾನಪದ ನಾಟಕದಲ್ಲಿ ಇಂಥ ಅವಿಷ್ಕಾರ ನನಗೆ ಹೊಂದುತ್ತದೆ ಅನಿಸಲಿಲ್ಲ. ಅದರ ಬದಲು, ದೊಂದಿಯೆಂದು ಸೂಚ್ಯವಾಗಿ ಹೇಳುವಂತೆ ಒಂದು ದೊಂದಿಯ ಚಿತ್ರವಿರುವ ಕೋಲು ಹಿಡಿದು ತರುವುದು ಎಷ್ಟೋ ಮೇಲು ಅಂದುಕೊಂಡೆ. ಜಾನಪದ ಶೈಲಿಯಲ್ಲಿ ಒಂದು ಸುತ್ತು ಬಂದು, ಭೂಮಿಯಿಂದ ಕೈಲಾಸಕ್ಕೆ ಹೋಗುವುದನ್ನು ಪೂರೈಸುವ ಚಮತ್ಕಾರ ಸಲ್ಲುವುದು ಇರುವಾಗ ಇದೇ ಸರಿ ಅನಿಸಿತು. ಆದರೂ ಬಿಡದೆ, ಸರ್ಕಸ್ ಕಂಪನಿಯವರನ್ನು ಸಂಪರ್ಕಿಸಿ ಕೇಳಿದೆ; ಯಾರಿಂದಲೂ ಒಳಾಂಗಣದಲ್ಲಿ ಬೆಂಕಿ ಹೇಗೆ ತರುವುದು ಎಂದು ಗೊತ್ತಾಗಲಿಲ್ಲ. ಕಡೆಗೆ ಗೂಗಲ್ ಕೃಪೆಯಿಂದ, ಅಮೇರಿಕದಲ್ಲಿ ತಯಾರಾಗುವ ಹೊಗೆ ಉಗುಳದ ಬೆಂಕಿಯ ಇಂಧನ ಸಿಗುವುದು ಗೊತ್ತಾಯಿತು. ಪೆಟ್ರೋಲ್‌ನ ಪರಿಶುದ್ಧ ರೂಪದ ಒಂದು ರೀತಿಯ ಜೆಲ್. ತಾನೇ ತಾನಾಗಿ ಉರಿಯುವ ಅದು ಹೊಗೆಯನ್ನು ಕಾರುವುದಿಲ್ಲ ಎಂದು ಗೊತ್ತಾಯಿತು. ಅದರ ಸಿಡ್ನಿಯ ಹೋಲ್‌ಸೇಲರನ್ನು ಹಿಡಿದು, ಅವನ ಮೂಲಕ ಯಾವ ಅಂಗಡಿಯಲ್ಲಿ ಅದು ಸಿಗುತ್ತದೆ ಎಂದು ಗೊತ್ತು ಮಾಡಿಕೊಂಡೆವು. ಎರಡು ಪುಟ್ಟ ಡಬ್ಬ ತಂದು ನಮ್ಮ ಬಳಕೆಗೆ ಹೊಂದುತ್ತದೆಯೇ ಎಂದು ಪರೀಕ್ಷಿಸಿದೆವು. ನಂತರ ಅದಕ್ಕೆ ಸರಿಯಾಗಿ ದೊಂದಿ ಮಾಡಿಕೊಂಡು ಬಳಸಿದೆವು. ಜೆಲ್ ಚೆಲ್ಲದಂತೆ, ಕುಣಿಯುತ್ತಾ, ಇನ್ನೊಂದು ಕೈಯಲ್ಲಿ ಕುಡುಗೋಲಿನಿಂದ ಕಡಿಯುವುದು ಎಂಥ ಸರ್ಕಸ್ ಆಟಕ್ಕೂ ಕಡಿಮೆ ಇಲ್ಲದ ಕೆಲಸವಾಗಿ, ಒಂದು ರೀತಿಯಲ್ಲಿ ನಮ್ಮ ಜೋಕುಮಾರಸ್ವಾಮಿ ಮರುಸೃಷ್ಠಿಯ ತೊಡಕುಗಳಿಗೆ ಪ್ರತೀಕವಾಗಿ ಕಂಡಿತು.