ಗೌಡನ ಗತ್ತು, ಬಸಣ್ಣನ ಎದೆಗಾರಿಕೆ!


“ದಟ್ಸ್ ಕನ್ನಡ”ದಲ್ಲಿ ಪ್ರಕಟವಾದ ಬರಹ

Srinivas Karkenhalli

ಕವಿ ಮತ್ತು ನಾಟಕಕಾರ ಚಂದ್ರಶೇಖರ ಕಂಬಾರ ವಿರಚಿತ ‘ಜೋಕುಮಾರಸ್ವಾಮಿ‘ ನಾಟಕ ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ 2007 ಜೂನ್ 23ರಂದು ಈ ರಂಗಪ್ರದರ್ಶನ ಕಂಡಿತು.


ಜೋಕುಮಾರಸ್ವಾಮಿ ಮೂವತ್ತೈದು ವರ್ಷಗಳ ಹಿ೦ದೆ ಬೆ೦ಗಳೂರಿನ ಮತ್ತು ಕರ್ನಾಟಕದ ಜನಕ್ಕೆ ತನ್ನ ಭಾಷೆ, ಜಾನಪದ ತಾಕತ್ತಿನ ಮೂಲಕ ಒ೦ದು ಷಾಕ್ ಕೊಟ್ಟಿತ್ತು.

ಆ ಷಾಕ್‌ಅನ್ನು ಆವತ್ತು ಅಪ್ಪಿಕೊಂಡಿದ್ದ ನನಗೆ ಆ ಅನುಭವವನ್ನು ಮತ್ತೆ ಪಡೆಯುವ ಅವಕಾಶ ಸಿಕ್ಕಿತು ಇಲ್ಲಿ, ಸಿಡ್ನಿಯಲ್ಲಿ.

ಸಿಡ್ನಿಯ ಅನಿವಾಸಿ ಕಲಾ ತಂಡದೊಡನೆ ಸುದರ್ಶನ್ ನಾರಾಯಣ್ ಅವರು ನಿರ್ದೇಶಿಸಿದ ಪ್ರದರ್ಶನ ಅಂಥದೇ ಅನುಭವವನ್ನು ಇಲ್ಲಿನ ರಂಗಾಸಕ್ತರಿಗೆ ಕೊಟ್ಟಿತು. ಗೌಡನೊಬ್ಬನ ದಬ್ಬಾಳಿಕೆ, ಅವನನ್ನು ಎದುರಿಸುವ ಬಸಣ್ಣನ ಎದೆಗಾರಿಕೆ, ಗೌಡನಿ೦ದ ಮಗುವಾಗಲಿ ಎ೦ದು ಕಣ್ಣೀರು ಸುರಿಸುವ ಗೌಡತಿ ಇವರೆಲ್ಲರ ಸುತ್ತ ಹೆಣೆದ ನಾಟಕ ಇದು. ಕನ್ನಡದ ಸುಪ್ರಸಿದ್ಧ ಕವಿ ಮತ್ತು ನಾಟಕಕಾರ ಚಂದ್ರಶೇಖರ ಕಂಬಾರ ರಚಿಸಿದ್ದು. ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ ಜೂನ್ 23ರಂದು ಈ ಪ್ರದರ್ಶನ ರಂಗಾಯಿತು.

ಒಂದು ದೃಷ್ಟಿಯಲ್ಲಿ, ಕಥೆ ಮತ್ತು ಸನ್ನಿವೇಶ ಇವೆಲ್ಲಾ ಗೌಣ. ಉತ್ತರ ಕರ್ನಾಟಕದ ಭಾಷೆಯ ಸೊಗಡು, ಅಲ್ಲಿಯ ಉಡುಪು, ಮಣ್ಣಿನ ವಾಸನೆ ಸೂಸುವ ಸ೦ಗೀತ ಇವು ಮುಖ್ಯವಾಗುತ್ತವೆ. ನಾಟಕದ ಯಾವುದೇ ವಿಭಾಗವನ್ನು ಗಮನಿಸಿದರೂ ಅದರಲ್ಲಿ ವಿಜಯಿಗಳಾದರು ನಮ್ಮ ಅನಿವಾಸಿ ಕಲಾ ತಂಡದವರು. ಇವರ ರಂಗಪ್ರಯೋಗದಲ್ಲಿ ಜೋಕುಮಾರಸ್ವಾಮ ಒಂದು ಅವಿಸ್ಮರಣೀಯ ಸಂಗತಿಯಾಯಿತು ಎಂದರೆ ಅತಿಶಯೋಕ್ತಿಯಲ್ಲ.

ಗೌಡ, ಬಸಣ್ಣ ಇವರ ಮುಖಾಮುಖಿ, ಗೌಡತಿ ತನ್ನ ದು:ಖ ತೋಡಿಕೊಂಡಿದ್ದು, ಗೌಡತಿ ಮತ್ತು ಬಸಣ್ಣ ಅವರ ಸಮಾಗಮ, ನಂತರ ಗೌಡತಿಯ ಶರಣಾಗತಿ, ನಿ೦ಗಿ, ಗೌಡರ ಮುಖಾಮುಖಿ ಇವು ಸದಾಕಾಲ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ. ನಾಟಕ ಮತ್ತು ರಂಗಪ್ರಯೋಗ ನೋಡಿದವರ ಮನದಲ್ಲಿ ಕತೆಯ ಸಂದರ್ಭ, ಅದನ್ನು ಸಾದರಪಡಿಸಿದ ಕೌಶಲ ಅಚ್ಚೊತ್ತಿಬಿಡುತ್ತದೆ. ಸ೦ಭಾಷಣೆ, ಸಂಗೀತ, ನೃತ್ಯ ಮೈಝುಮ್ ಎನ್ನುವಂತೆ ಇದ್ದವು.

ಕೊನೆಯಲ್ಲಿ ಬಸಣ್ಣನ ಕೊಲೆಯ ದೃಶ್ಯ ರುದ್ರರಮಣೀಯವಾಗಿತ್ತು; ಪಂಜು, ಕುಡುಗೋಲುಗಳನ್ನು ಹಿಡಿದ ಆಳುಗಳ ಆರ್ಭಟ, ಗೌಡನ ಕೇಕೆ, ಯಾವುದೇ ಸಿನೆಮಾವನ್ನೂ ಮೀರಿಸಿ ನಿ೦ತಿತ್ತು. ಗೌಡನಾಗಿ ಶ್ಯಾಮ್ ಸಿಂಗ್, ಬಸಣ್ಣನಾಗಿ ಸುದರ್ಶನ್ ನಾರಾಯಣ್, ಗೌಡತಿಯಾಗಿ ವೀಣಾ, ಸೂತ್ರಧಾರನಾಗಿ ರಮೇಶ್, ಗಿರಿಯನಾಗಿ ಮಹೇಂದ್ರ ಸಿಂಗ್ ಇವರುಗಳ ಅಭಿನಯ ಗಮನಾರ್ಹ.

ಸಂಗಿತ, ನೃತ್ಯ ಇಲ್ಲಿ ಹಾಸುಹೊಕ್ಕಾಗಿ, ನಾಟಕದ ಅವಿಭಾಜ್ಯ ಅಂಗಗಳಾದವು. ರೇಖಾ ಶಶಿಕಾಂತ್, ಅಪರ್ಣ ನಾಗಶಯನ, ಲಕ್ಷ್ಮಿ ಅಳವಂಡಿ ಮುಂತಾದವರ ಧ್ವನಿಯಿಂದ ಅದು ಶ್ರೀಮಂತವಾಯಿತು. “ಸ್ವಾಮಿ ನಮ್ಮಯ ದೇವರು, ಢಂ, ಢಂ ಇವರ ಹೆಸರು ” ಎ೦ಬ ಅಟ್ಟಹಾಸದ ಹಾಡಾಗಲಿ, “ದೂರನಾಡಿನ ಹಕ್ಕಿ ಹಾರಿಬಾ ಗೂಡಿಗೆ, ಗೂಡು ತೂಗ್ಯಾವ ಗಾಳಿಗೆ ” ಎಂಬ ಅ೦ತರ೦ಗದ ಧ್ವನಿಯಾಗಲಿ ಇವರ ಕಂಠಗಳಿಂದ ಲೀಲಾಜಾಲವಾಗಿ ಬಂದವು.

ಜೋಕುಮಾರಸ್ವಾಮಿ ರಾಮಾಯಣ, ಮಹಾಭಾರತಗಳಂತೆ ಒಂದು ನಿತ್ಯ ನಿರಂತರ ನಾಟಕ. ಇ೦ದಿಗೂ ಸಾರ್ವತ್ರಿಕವಾಗಿ ನಡೆಯುತ್ತಲೇ ಇದೆ. ಇದಕ್ಕೆ ದ್ಯೋತಕವಾಗಿ ನಿರ್ದೇಶಕ ಸುದರ್ಶನ್ ನಾರಾಯಣ್ ನಾಟಕದ ಭಾಷೆಯನ್ನು ಆಸ್ಟ್ರೇಲಿಯಾಕರಿಸಿದ್ದು ಅತ್ಯ೦ತ ಶ್ಲಾಘನೀಯ; “risky ದೇವರು” , “sexual reference”, “love ಮಾಡ್ದ”, Bush ತಮ್ಮ”, ಇತ್ಯಾದಿ ಪ್ರಯೋಗಗಳು ರ೦ಜನೀಯವಾಗಿದ್ದವು.
ಅಂಕದಪರದೆ ಜಾರಿದ ಮೇಲೆ ಅನಿಸಿದ್ದು : ಇನ್ನು ನಾವು ಕಲೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಬೇಕೆ ಅಥವಾ ಭಾರತಕ್ಕೆ ಇಲ್ಲಿಂದ ರಫ್ತು ಮಾಡಬೇಕೆ? ಎಂಬ ಆಲೋಚನೆಯಲ್ಲಿ ನಾವು ಮನೆಗೆ ತೆರಳಿದೆವು.