ಸಿಡ್ನಿಯ ಕಲಾ ತಂಡ – ನಾಟಕ, ಹಾಡು, ಕತೆ, ಚಲನಚಿತ್ರಗಳಲ್ಲಿ ನಲಿಯುವವರು
ಪರದೇಶದಲ್ಲಿ ಬಂದು ವಾಸವಾಗಿದ್ದರೂ, ತಮ್ಮ ಕಲಾವಂತಿಕೆಯನ್ನು ಉಳಿಸಿಕೊಳ್ಳುವ ಆಸೆ ಅನಿವಾಸಿ ಜನರಲ್ಲಿ ಪ್ರಬಲವಾಗಿರುವುದು ಆಶ್ಚರ್ಯವೇನಲ್ಲ.
ನಮ್ಮ ದೇಶ, ಜನ, ನಡೆ, ನುಡಿಗಳಲ್ಲಿನ ವಿಶೇಷಗಳನ್ನು ಪ್ರತಿಬಿಂಬಿಸುವ ಹಂಬಲ ತುಂಬಾ ಸಹಜ ಹಾಗೂ ಸಾರ್ವತ್ರಿಕ. ಆ ಹಂಬಲವೇ ನಾವು ನೆಲೆಸಲು ಬಂದ ನಾಡಿಗೆ ಶ್ರೀಮಂತಿಕೆ ಹಾಗೂ ರಂಗನ್ನು ತರುತ್ತದೆ.
ಆ ಹಿನ್ನೆಲೆಯಲ್ಲಿ ಅನಿವಾಸ ಕಲಾ ತಂಡ ಇಸವಿ ೨೦೦೦ನೇ ವರ್ಷದಿಂದ ನಾಟಕ ಹಾಗು ಕಿರುಚಿತ್ರಗಳನ್ನು ಮಾಡುತ್ತಾ ಬಂದಿರುವ ಸಕ್ರಿಯವಾದ ಕನ್ನಡಿಗರ ತಂಡ.
ಸಿಡ್ನಿಯಲ್ಲಿ ಹಲವಾರು ವರ್ಷಗಳಿಂದಲೂ ನಾಟಕಗಳು ಪ್ರದರ್ಶನಗೊಂಡಿದ್ದರೂ, ಮೊತ್ತ ಮೊದಲ ಬಾರಿಗೆ ಸ್ವತಂತ್ರವಾಗಿ ನಾಟಕ ಪ್ರದರ್ಶನ ಆರಂಭಗೊಂಡಿತು. ಅನಿವಾಸಿಯ ಚೊಚ್ಚಲ ಪ್ರಯೋಗ “ಬೆಕ್ಕು ಬಾವಿ”ಯ ಪ್ರದರ್ಶನದ ಯಶಸ್ಸಿನಿಂದ ಹುರುಪುಗೊಂಡು ೨೦೦೧ ರಲ್ಲಿ “ಜುಗಾರಿಕೂಟ” ನಾಟಕವನ್ನು ಪ್ರದರ್ಶಿಸಿದೆವು. ನಂತರ ಅದೇ ವರ್ಷ “ಜಾನಪದ ಲೋಕ” ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದೆವು.
೨೦೦೨ರಲ್ಲಿ ತಯಾರಿಸಿದ “ಕ್ಲೌಡ್ಸ್ ವೀಪ್ ಆನ್ ದಿ ಗ್ರೀನ್‌ನೆಸ್” ಎಂಬ ಕಿರುಚಿತ್ರ ಆಸ್ಟ್ರೇಯಲಿಯಾದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕಿರುಚಿತ್ರೋತ್ಸವ “ಟ್ರಾಪ್‌ಫೆಸ್ಟ್”ನ ಅತ್ಯುತ್ತಮ ಹದಿನಾರು ಚಿತ್ರಗಳಲ್ಲಿ ಒಂದಾಗಿ ಫೈನಲಿಸ್ಟ್ ಚಿತ್ರವಾಗಿ ಆಯ್ಕೆಗೊಂಡಿತು.
೨೦೦೩ರಲ್ಲಿ ನಾವು ತಯಾರಿಸಿದ “ಓಯಸಿಸ್” ಎಂಬ ಕಿರುಚಿತ್ರ ಆಸ್ಟ್ರೇಲಿಯಾದ ಬೈರನ್ ಬೇ ಕಿರಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡದದ್ದಲ್ಲದೆ ಇಟಲಿಯ ರೋಮ್ ಇಂಡಿಪೆಂಡೆಂಟ್ ಚಿತ್ರೋತ್ಸವ, ಮತ್ತು ಸ್ಪೇನಿನ ಬಾರ್ಸಿಲೋನ ಚಿತ್ರೋತ್ಸವಗಳಲ್ಲೂ ಆಯ್ಕೆಗೊಂಡು ಪ್ರದರ್ಶನಗೊಂಡಿದ್ದು ಹೆಮ್ಮೆಯ ವಿಷಯ.
ಇನ್ನು ಮುಂದೆಯೂ…
ಸಿಡ್ನಿಯ ಕನ್ನಡಿಗರಿಗಾಗಿ ನಾಟಕ, ಸಂಗೀತ ಪ್ರದರ್ಶನಗಳನ್ನು ಕೊಡಬೇಕೆಂದು ನಮ್ಮ ಆಸೆ. ಅದಕ್ಕೆ ನಿಮ್ಮ ಬೆಂಬಲ ಇದೆ ಎಂದು ನಮಗೆ ವಿಶ್ವಾಸವಿದೆ. ಸಾಧ್ಯವಾದರೆ ಕನ್ನಡದ ಉತ್ತಮ ನಿರ್ದೇಶಕರನ್ನು ಇಲ್ಲಿಗೇ ಕರೆಸಿಕೊಂಡು ನಾಟಕ ಮಾಡಿಸಬೇಕೆಂಬ ಹಿರಿಯಾಸೆ ನಮ್ಮದು. ಹಾಗೆಯೆ ಕನ್ನಡದ ಉತ್ತಮ ಅಭಿರುಚಿಯ ಮತ್ತು ಗಂಭೀರ ಚಲನಚಿತ್ರಗಳ ಉತ್ಸವವನ್ನು ಮಾಡಬೇಕೆಂಬ ಯೋಚನೆಯೂ ಇದೆ. ಅದಕ್ಕೆ ನಿಮ್ಮ ಸಹಕಾರವನ್ನು ಕೋರುತ್ತೇವೆ.