ಏಕೀಕರಣ ಹಾಗು ಮನಸ್ಸಿಗೆಷ್ಟು ಮುಖಗಳು

Madhusudana Chakravarthy

– ಡಾ || ಸಿ. ವಿ. ಮಧುಸೂದನ  – ಸುಗಮಕನ್ನಡ.ಕಾಂ ನಲ್ಲಿ ಪ್ರಟಕಗೊಂಡದ್ದು

ಸಿಡ್ನಿ ಕನ್ನಡ ಶಾಲೆಯ ಹತ್ತನೆಯ ವಾರ್ಷಿಕೋತ್ಸವದ ಅಂಗವಾಗಿ, ಭಾನುವಾರ 8 ನವೆಂಬರ್ 2015 ರಂದು ಮಧ್ಯಾಹ್ನ ಮೂರು ಘಂಟೆಗೆ ಟೂಂಗಾಬೀ ಈಸ್ಟ್ ಪಬ್ಲಿಕ್ ಸ್ಕೂಲಿನಲ್ಲಿ ಎರಡು ನಾಟಕಗಳನ್ನು ಪ್ರದರ್ಶಿಸಲಾಯಿತು. ಅದರ ಸಂಕ್ಷಿಪ್ತ ವರದಿ.

ಏಕೀಕರಣ (ರಚನೆ: ಬೀChi)

ಏಕೀಕರಣ

ನಾಟಕಕಾರ : ಬೀChi

ಮುಖ್ಯ ಪಾತ್ರಗಳು (ಪಾತ್ರಧಾರಿಗಳು) ಸೂತ್ರಧಾರ : ನಾರಾಯಣ ಕನಕಾಪುರ  ನರಸಮ್ಮ: ದೇಸಾಯರ ತಾಯಿ (ಶ್ರೀಮತಿ ವೀಣಾ ಸುದರ್ಶನ್) ಹನುಮಂತ ಕೊನ್ಹೇರ ದೇಸಾಯಿ: ಅಡ್ವೋಕೇಟ್ (ಶ್ರೀ ಶ್ಯಾಮ್ ಸಿಂಗ್) ವೆಂಕಟಲಕ್ಷ್ಮು: ದೇಸಾಯರ ಹೆಂಡತಿ (ಶ್ರೀಮತಿ ಅಪರ್ಣಾ ನಾಗಶಯನ) ಕೃಷ್ಣ: ಅನ್ನದಾತ-ಅಡಿಗೆಮಾಣಿ (ಶ್ರೀ ಬೆಳ್ಳಾವೆ ನಾಗಶಯನ) ರಹೋತ್ತರಾವು : ಅತಿಥಿ (ಶ್ರೀ ಮಹೇಂದ್ರ ಸಿಂಗ್ )    

ಗದಗಿನ ಅಡ್ವೋಕೇಟ್, ಬಳ್ಳಾರಿಯ ಅವರ ತಾಯಿ, ಕೋಲಾರದ ಅವರ ಕಿರಿಯ ಹೆಂಡತಿ, ಕುಂದಾಪುರದ ಅವರ ಮಾಣಿ ಮತ್ತು ಕೊಯಮತ್ತೂರಿನ ಅತಿಥಿ ಇವರೆಲ್ಲರೂ ಮಾತನಾಡುವುದು ಒಂದಲ್ಲ ಒಂದು ಬಗೆಯ ಕನ್ನಡವಾದರೂ, ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಅರ್ಥವಾಗುವುದಿರಲಿ, ಅಪಾರ್ಥವಾಗುವುದೇ ಹೆಚ್ಚು. ಈ ಪ್ರಹಸನವನ್ನು ಬೀChi ಅವರು ಬರೆದು 50 – 60 ವರ್ಷಗಳಾಗಿದ್ದರೂ, ಇದರ ಹಾಸ್ಯ ಸ್ವಲ್ಪವೂ ಮಾಸಿಲ್ಲ. ಭಾನುವಾರ ನಮಗೆ ನೀಡಿದ ಪ್ರದರ್ಶನವನ್ನು ನೋಡುವಾಗಲಂತೂ  ಸೂತ್ರಧಾರನ ಉಪೋದ್ಘಾತದಿಂದ ನಾಟಕದ ಕೊನೆಯವರೆಗೆ ನಮ್ಮ ನಗೆಗೆ ತಡೆಯೇ ಇರಲಿಲ್ಲ. ಮೂಲದಲ್ಲಿ ವೆಂಕಟಲಕ್ಷ್ಮಿ ತನ್ನ ಗಂಡನ ಕಂಕುಳಲ್ಲಿ ಸೂಟ್ ಕೇಸ್ ಅನ್ನು ಇರಿಸಿ ಅವನ ತಲೆಯ ಮೇಲೆ ದೊಡ್ಡ ಹಾರನ್ ಉಳ್ಳ ಗ್ರಾಮಫೋನೆ ಪೆಟ್ಟಿಗೆಯನ್ನು ಇಡುವಳು. ಪ್ರಾಯೋಗಿಕ ತೊಂದರೆಗಳಿಂದ ಇದನ್ನು ಮಾಡಲಾಗಲಿಲ್ಲ ಎಂದು ತೋರುತ್ತದೆ. ಆದರೆ ಇದನ್ನು ಊಹಿಸಿಕೊಂಡರೆ ಸಾಕು, ನಗೆ ಉಕ್ಕಿ ಬರುತ್ತದೆ. ಗದಗಿನ ಲಾಯರಿಯ ತಲೆಯ ಮೇಲೆ ಮೈಸೂರಿನ ಸರಿಗೆ ರುಮಾಲು ಏಕೆ ಬಂತು ಎಂದು ನನಗೆ ಒಂದು ಕ್ಷಣ ಅನಿಸಿದರೂ, ಇದು ವೆಂಕಟಲಕ್ಷ್ಮಿಯ ಪ್ರಭಾವವೇ ಇರಬೇಕು ಎಂದು ಅರ್ಥಮಾಡಿಕೊಂಡೆ. ನಾಟಕದ ಅಂತ್ಯ ಮೂಲಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ಆದರೆ ಇದರಿಂದ ನಾಟಕದ ಹಾಸ್ಯಕ್ಕೂ, ಸಂದೇಶಕ್ಕೂ ಯಾವ ರೀತಿಯ ಕುಂದೂ ಆಗಲಿಲ್ಲವೆಂದೇ ನನ್ನ ಅಭಿಪ್ರಾಯ. ಈ ನಾಟಕದ ತರುವಾಯ ಸುಮಾರು ಅರ್ಧ ಘಂಟೆ ವಿರಾಮವಿದ್ದು ಬಂದಿದ್ದ ಪ್ರೇಕ್ಷರಿಗೆ ರುಚಿಯಾದ ತಿನಿಸುಗಳು ಮತ್ತು ಸೊಗಸಾದ ಕಾಫಿಯನ್ನು ಸೇವಿಸಲು ಅವಕಾಶವಾಯಿತು.  

ಮನಸ್ಸಿಗೆಷ್ಟು ಮುಖಗಳು (ರಚನೆ: ಪ್ರಕಾಶ್ ಕಂಬತ್ತಳ್ಳಿ)

ಮನಸ್ಸಿಗೆಷ್ಟು ಮುಖಗಳು

ನಾಟಕಕಾರರು : ಪ್ರಕಾಶ್ ಕಂಬತ್ತಳ್ಳಿ

ಮುಖ್ಯ ಪಾತ್ರಗಳು (ಪಾತ್ರಧಾರಿಗಳು) ಅಜ್ಜಿ: ಮನೆಯೊಡತಿ  – (ಗೀತಾ ಹಿರೇಮಠ್)  ಸುಬ್ಬಣ್ಣ: ದೊಡ್ಡ ಮಗ – (ಮನೋಹರ್ ರಾಜಶೇಖರ್)  ಸರಸ್ವತಿ: ದೊಡ್ಡ ಸೊಸೆ – (ನಿರ್ಮಲ ಮನೋಹರ್) ನಾಗಣ್ಣ: ಕಿರಿಯ ಮಗ (ಶ್ರೀ ಗುರಪ್ಪ ಹರೀಶ) ಸೀತಾ: ಕಿರಿಯ ಸೊಸೆ (ಸುನೀತ ಹರೀಶ್) ರವಿ: ಸುಬ್ಬಣ್ಣ/ಸರಸ್ವತಿಯರ ಮಗ (ಮಹೇಂದ್ರ ಸಿಂಗ್ ) ಗಿರಿಜಾ: ನಾಗಣ್ಣ/ಸೀತೆಯರ ಮಗಳು (ಮಾನಸ ಬಾಬು) ಡಾಕ್ಟರು (ಶ್ರೀ ಶ್ಯಾಮ್ ಸಿಂಗ್); ಲಾಯರು (ಬಸವರಾಜ್ ಮಠಪತಿ ); ತಂಗಿ (ಶ್ರೀಮತಿ ವೀಣಾ ಸುದರ್ಶನ್)  

ಎರಡೂ ನಾಟಕಗಳಿಗೆ ತಾಂತ್ರಿಕ ಸಹಾಯ:  ಸುದರ್ಶನ್ – ಸಂಗೀತ ಸಂಯೋಜನೆ ಮತ್ತು ಧ್ವನಿ ನಿರ್ವಹಣೆ  ಸಾರಂಗ  – ಬೆಳಕು ಮತ್ತು ರಂಗಸಜ್ಜಿಕೆ                

ಅನ್ಯೋನ್ಯ ಪ್ರೀತಿಯಿಂದ, ಸಂತಸ, ಸೌಹಾರ್ದದಿಂದ ಕೂಡಿದ ಕುಟುಂಬದ ಕಥೆ ಇದು. ಅಜ್ಜಿ ಇದ್ದಕ್ಕಿದ್ದಂತೆ (ನಿಜವಾಗಿಯೋ, ಅಥವಾ ತನ್ನವರನ್ನು ಪರೀಕ್ಷಸಲೆಂದೋ) ಅಸ್ವಸ್ಥಳಾಗುತ್ತಾಳೆ. ಮೊದಲು ಎಲ್ಲರಿಗೂ ಗಾಬರಿಯಾಗುತ್ತದೆ. ಡಾಕ್ಟರನ್ನು ಕರೆಸುತ್ತಾರೆ. ಅನಂತರ ಒಂದು ವೇಳೆ ಅಜ್ಜಿಯು ಕೊನೆಯುಸಿರೆಳೆದರೆ, ಆಕೆಯ  ಹಾಸಿಗೆಯ ಕೆಳಗಿರುವ ಪೆಟ್ಟಿಗೆಯಲ್ಲಿ ಇರಬಹುದಾದ ಒಡವೆ ಮತ್ತು ಹಣ ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಚರ್ಚೆ ಶುರುವಾಗಿ ಎಲ್ಲರಲ್ಲೂ   ಮನಸ್ತಾಪ ಮತ್ತು ಪರಸ್ಪರ ಜಗಳಗಳು ಆರಂಭವಾಗುತ್ತವೆ. ಇದರ ಪರಿಹಾರ ಹೇಗಾಗುತ್ತದೆ ಎಂಬುದು ಮುಂಬರುವ ಸರಳವಾದ ಮತ್ತು ಅಲ್ಲಲ್ಲಿ ನಗೆಬರಿಸುವ ಸಂಭಾಷಣೆಗಳಲ್ಲಿ ಮತ್ತು ಸಾಂಕೇತಿಕ ಅಂತ್ಯದಲ್ಲಿ ಪ್ರೇಕ್ಷಕರಿಗೆ ಅರಿವಾಗುತ್ತದೆ.               ಎರಡೂ ನಾಟಕಗಳ ನಿರ್ದೇಶಕಿ ಶ್ರೀಮತಿ ವೀಣಾ ಸುದರ್ಶನ್. ಪ್ರಸ್ತುತ ಪ್ರದರ್ಶನದಲ್ಲಿ ದೃಶ್ಯದಿಂದ ದೃಶ್ಯಕ್ಕೆ ಮಾರ್ಪಾಟು ಸಹಜವಾಗಿ, ಸುಲಭವಾಗಿ ಗಡಿಬಿಡಿಯಿಲ್ಲದೆ ಆಗುತ್ತಿದ್ದುದು  ಅವರ ಉತ್ತಮ ನಿರ್ದೇಶನಕ್ಕೆ ಒಂದು ಸಾಕ್ಷಿ. ಇದು ಮಾತ್ರವಲ್ಲ, ಪಾತ್ರಧಾರಿಗಳೆಲ್ಲರಲ್ಲೂ  ಅವರವರ ಅಭಿನಯಗಳಲ್ಲಿ ಉತ್ಕೃಷ್ಟತೆಯನ್ನು ತರಲು ಅವರು ಯಶಸ್ವಿಯಾಗಿದ್ದರು                      

ಸುದರ್ಶನ ಮತ್ತು ಸಾರಂಗ ಅವರ ರಂಗದ ಮೇಲಿನ ದೀಪಗಳ ಬೆಳಕು ಮತ್ತು ಧ್ವನಿಗಳ ಸಂಯೋಜನೆ ಶ್ರೇಷ್ಠ ಗುಣಮಟ್ಟದಾಗಿತ್ತು. ಒಟ್ಟಿನಲ್ಲಿ ನಾಟಕಗಳೆರಡೂ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸಿದುವು ಎಂಬುದರಲ್ಲಿ ಸಂದೇಹವಿಲ್ಲ

Read more at: http://sugamakannada.com/programs/?e=3290
Copyright © www.sugamakannada.com